ಹೋರತಂತ್ರ / Horatantra
₹400.00
ಅರುಣ್ ಭಟ್
" ಹೋರಾ ತಂತ್ರ " ಇದು ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ಕೊಳಗಿಯ ಅರುಣ ಭಟ್ಟರು ಜ್ಯೋತಿಷ ಶಾಸ್ತ್ರದ ಕುರಿತು ಬರೆದಿರುವ ವಿಶಿಷ್ಟವಾದ ಪುಸ್ತಕ. ಕನ್ನಡದಲ್ಲಿ ಇಲ್ಲಿಯವರೆಗೆ ಯಾರೂ ಬರೆದಿರದ ವಿನೂತನ ಶೈಲಿಯ ಪುಸ್ತಕ. ವ್ಯಕ್ತಿಯನ್ನು ಚಿಂತನೆಯ ಒರೆಗೆ ಹಚ್ಚುವ ಹಲವು ವಿಚಾರಗಳು ಇಲ್ಲಿ ಸಿಗುವುದು.
ಜ್ಯೋತಿಷ ಶಾಸ್ತ್ರದಲ್ಲಿ ಹೇಳಿರುವ ಭಾವ ಫಲ. ದಶಾಭುಕ್ತಿ ಫಲ. ಗೋಚರ ಫಲಗಳ ಶ್ಲೋಕಗಳಾಗಲೀ ಅರ್ಥವಾಗಲೀ ಇಲ್ಲಿಲ್ಲ! ಬದಲಿಗೆ ಆಂತರಿಕ ಉನ್ನತಿಗಾಗಿ ಜ್ಯೋತಿಷ ಶಾಸ್ತ್ರವನ್ನು ಬಳಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಬೆಳಕು ಚೆಲ್ಲಲಾಗಿದೆ. ಜ್ಯೋತಿಷ ಶಾಸ್ತ್ರ ರಚನಾಕಾರರಾದ ಋಷಿಗಳ ಉದ್ದೇಶ ಏನಿತ್ತು. ವರಾಹಮಿಹಿರಾಚಾರ್ಯರು ಹೋರಾ ಗ್ರಂಥವನ್ನು ಯಾವ ದೃಷ್ಟಿಕೋನದಿಂದ ರಚಿಸಿದ್ದಾರೆ . ಶಾಸ್ತ್ರವನ್ನು ಬಳಸುವ ನೈಜ ಮಾರ್ಗವಾವುದು . ಮೌಲ್ಯಾಧಾರಿತ ಜ್ಯೋತಿಷ ವೃತ್ತಿಯಲ್ಲಿ ಜ್ಯೋತಿಷಿ ಹೇಗಿರಬೇಕು ಎಂಬುದನ್ನು ಲೇಖಕರು ತಮ್ಮ ಆಂತರಿಕ ಪ್ರಯಾಣದ ಅನುಭವದ ಮುಖಾಂತರ ಬಿಚ್ಚಿಟ್ಟಿದ್ದಾರೆ.
ಉತ್ತಮ ಗುರುಕುಲ ಪದ್ಧತಿ ಹೇಗಿತ್ತು. ಜ್ಯೋತಿಷಿಯ ಬುದ್ಧಿ ಜ್ಞಾನ ಹಾಗೂ ಅರ್ಹತೆ. ಮನುಷ್ಯ ಜೀವನದ ನಾಲ್ಕು ಆಯಾಮಗಳು ಮತ್ತು ಕರ್ಮಸಿದ್ಧಾಂತ. ಪ್ರಶ್ನಶಾಸ್ತ್ರವು ಬೇಟೆಯ ಬಲೆಯಾಗಿ ಹೇಗೆ ಬಳಕೆಯಾಗುತ್ತಿದೆ. ಧಾರ್ಮಿಕ ಸಾಂಸ್ಕೃತಿಕ ಮತಾಂತರಣ ಹೇಗೆ ಆಗುತ್ತಿದೆ. ಮೌಲ್ಯಾಧಾರಿತ ಜ್ಯೋತಿಷ ವೃತ್ತಿ ಹೇಗೆ. ಜ್ಯೋತಿಷಿಯ ಜ್ಯೋತಿಷ್ಯ ದಂಧೆ. ಜ್ಯೋತಿಷಿಯೊಳಗಿನ ಕಪಟತೆ. ಜ್ಯೋತಿಷಿಗಳೊಂದಿಗಿನ ವಿಶ್ವಾಸದ ಶಕ್ತಿ. ಅಷ್ಟಮಂಗಲದಲ್ಲಿ ಪ್ರೇತದ ದುರ್ಬಳಕೆ. ಮೂಲಸಮಸ್ಯೆಯನ್ನು ಹುಡುಕುವ ಮಾರ್ಗ. ಆಭಿಚಾರ ಹಾಗೂ ವಶೀಕರಣವು ಸತ್ಯವೇ ? ಶಾಸ್ತ್ರಗಳನ್ನು ವಿಜ್ಞಾನಕ್ಕೆ ಹೋಲಿಸುವ ಅಜ್ಞಾನ. ಮೌಢ್ಯವೆಂದು ಭಾವಿಸುವ ಮೌಢ್ಯ. ಪರಕಾಯ ಪ್ರವೇಶ ರಹಸ್ಯ. ದಾನತಂತ್ರ. ಸಂತಾನ ತಂತ್ರ. ಬಾಲಗ್ರಹಾದಿ ತಂತ್ರ. ಲೈಂಗಿಕ ವಿಜ್ಞಾನ. ಗರ್ಭ ವಿಜ್ಞಾನ. ಭೋಜನ ವಿಜ್ಞಾನ. ಪಂಚವಿಧ ಅಹಂಕಾರಗಳು. ಪಂಚವಿಧ ಮೋಕ್ಷಮಾರ್ಗಗಳು. ಹೋರಾಶಾಸ್ತ್ರದ ಮೂಲಕ ಆತ್ಮಸಾಧನಾ ಮಾರ್ಗ ಹೀಗೆ ಹಲವು ಸಂಗತಿಗಳನ್ನು ಕುರಿತು ಮನೋಜ್ಞವಾಗಿ ವಿವರಿಸಲಾಗಿದೆ.
ಇಡೀ ಗ್ರಂಥವನ್ನು ಜ್ಯೋತಿಷ ಶಾಸ್ತ್ರ ಗೋಷ್ಠಿಯ ಸ್ವರೂಪದಲ್ಲಿ ಚಿತ್ರಿಸಲಾಗಿದೆ. ಭಾಸ್ಕರ ಭಟ್ಟರು. ಭೃಗು ದೀಕ್ಷಿತರು. ಅಂಗಾರಕ ಭಟ್ಟರು. ಶಂಭಟ್ಟರು. ಪೂರ್ಣಚಂದ್ರರು. ಕವಿಪಂಡಿತರು. ಗುರುಮೂರ್ತಿ ತಂತ್ರಿಗಳು ಈ ಏಳು ಪ್ರಧಾನ ಪಾತ್ರಗಳ ಮೂಲಕ ತಮ್ಮ ಅನುಭವ ಹಾಗೂ ವಿಚಾರಗಳನ್ನು ಲೇಖಕರು ಗುಲಾಬಿ ಹೂವಿನ ಪಕಳೆಗಳನ್ನು ಬಿಡಿಸಿದಂತೆ ಪದರುಪದರಾಗಿ ಬಿಡಿಸಿಟ್ಟಿದ್ದಾರೆ.
ಈ ಪುಸ್ತಕವನ್ನು ಅಧ್ಯಯನ ಮಾಡುವುದರಿಂದ ಯಾರ್ಯಾರಿಗೆ ಯಾವ ರೀತಿಯ ಪ್ರಯೋಜನವಾಗುವುದು ?
1. ಜ್ಯೋತಿಷಿಗಳಿಗೆ - ಜ್ಯೋತಿಷ ಶಾಸ್ತ್ರದಲ್ಲಿ ಆಳಕ್ಕಿಳಿದು ತನ್ನ ಅಂತರಂಗದ ಉನ್ನತಿ ಸಾಧಿಸುವುದು ಹೇಗೆ. ಜನರ ಸಮಸ್ಯೆಗಳನ್ನು ನಿವಾರಿಸಲು ಮೌಲ್ಯಾಧಾರಿತವಾಗಿ ಜ್ಯೋತಿಷವನ್ನು ಹೇಗೆ ಬಳಸಬೇಕು. ಮೋಸದ ಬಲೆಗೆ ಸಿಕ್ಕಿರುವವರನ್ನು ಹೊರತರುವುದು ಹೇಗೆ ಮುಂತಾದವುಗಳ ಬಗ್ಗೆ ತಿಳಿದು ಅಳವಡಿಸಿಕೊಳ್ಳಬಹುದು.
2. ಪುರೋಹಿತರು ಮತ್ತು ಅರ್ಚಕರಿಗೆ - ತಾವು ಮಾಡುವ ಜಪ ಪೂಜೆ ಹೋಮಾದಿಗಳನ್ನು ಭಾವನಾತ್ಮಕವಾಗಿ ಜನರ ಮನೋಕಾಮನೆ ನೆರವೇರಲು ಅನುಷ್ಠಿಸುವುದು ಹೇಗೆ. ಕಪಟ ಜ್ಯೋತಿಷಿಯ ಬಲೆಗೆ ಬಿದ್ದು ಹಣ ಮತ್ತು ನೆಮ್ಮದಿ ಕಳೆದುಕೊಳ್ಳುತ್ತಿರುವವರನ್ನು ಎಚ್ಚರಿಸುವುದು . ರಕ್ಷಿಸುವುದು ಹೇಗೆ ಎಂದು ತಿಳಿಯಬಹುದು.
3. ಜನಸಾಮಾನ್ಯರಿಗೆ : ಕಪಟತೆಯಿಂದ ದಂಧೆ ನಡೆಸುತ್ತಿರುವ ಜ್ಯೋತಿಷಿಗಳ. ಭೂತಪಾತ್ರಿಗಳ. ಮಂತ್ರವಾದಿಗಳ ಗಾಳಕ್ಕೆ ಸಿಕ್ಕ ಮೀನಿನಂತಾಗಿ ಹಣ. ನೆಮ್ಮದಿ. ಆತ್ಮವಿಶ್ವಾಸ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇನೆಯೇ ? ಜ್ಯೋತಿಷಿಯು ನನ್ನ ಹಿತವನ್ನು ಬಯಸುತ್ತಿದ್ದಾನೆಯೇ. ಅಂತಹ ಜ್ಯೋತಿಷಿಯನ್ನು ನಾನು ಆಯ್ಕೆ ಮಾಡಿಕೊಂಡಿದ್ದೇನೆಯೇ ಎಂಬುದನ್ನು ಅರಿತುಕೊಳ್ಳಬಹುದು.
4. ಜ್ಯೋತಿಷ ಶಾಸ್ತ್ರವನ್ನು ನಂಬದವನಾಗಿದ್ದಲ್ಲಿ : ತಾನು ಶಾಸ್ತ್ರವನ್ನು ನಂಬದಿರುವುದಕ್ಕೆ ಕಾರಣಗಳು ತನ್ನೊಳಗೆ ಹೇಗೆ ಸೃಷ್ಟಿಯಾಗಿವೆ ಹಾಗೂ ನೈಜಶಾಸ್ತ್ರವು ಅವೆಲ್ಲದಕ್ಕೂ ಹೇಗೆ ಹೊರತಾಗಿದ್ದು ವಾಸ್ತವ ಅಂಶಗಳನ್ನು ಒಳಗೊಂಡಿದೆ ಎಂದು ತಿಳಿಯಲು ಸಹಾಯವಾಗುವುದು.
ಮನುಷ್ಯನ ಆಂತರಿಕ ಉನ್ನತಿಯ ಪ್ರಧಾನ ಉದ್ದೇಶವನ್ನಿಟ್ಟುಕೊಂಡು ಕೊಳಗಿ ಅರುಣ ಭಟ್ಟರು ಈ ಗ್ರಂಥವನ್ನು ರಚಿಸಿದ್ದು ಬೆಂಗಳೂರಿನ ಶ್ರೀನಿಧಿ ಪಬ್ಲಿಕೇಷನ್ಸ್ ನವರು ಇದನ್ನು ಪ್ರಕಾಶನಗೊಳಿಸಿದ್ದಾರೆ.
380 ಪುಟಗಳಿರುವ ಈ ಪುಸ್ತಕಕ್ಕೆ 400 ರೂ. ಬೆಲೆಯಿದೆ.
Quantity
Only 2 left in stock
ಲೇಖಕರು
ಅರುಣ್ ಭಟ್
ಪ್ರಕಾಶಕರು
ಶ್ರೀನಿಧಿ ಪಬ್ಲಿಕೇಶನ್ಸ್
ಪುಟಗಳು
380

















