top of page

ತಂತ್ರ ಕುಸುಮಾಂಜಲಿ / Tantra Kusumaanjali

ಪುರೋನುವಾಕ್ಯ


'ಕುರ್ವನ್ನೇವೇಹ ಕರ್ಮಾಣಿ ಜಿ ಜೀವಿಷೇತ್'- ಈ ಲೋಕದಲ್ಲಿ ಬದುಕಲು ಇಚ್ಛಿಸುವ ಜೀವಿಯು ಸತ್ಕರ್ಮಗಳನ್ನು ಆಚರಿಸುತ್ತಾ ಬದುಕಬೇಕೆಂಬುದು ಉಪನಿಷತ್ತುಗಳ ಆಶಯವಾಗಿದೆ. ಚತುರ್ವಿಧ ಪುರುಷಾರ್ಥಗಳಲ್ಲಿ ಪರಮವೂ ಚರಮವೂ ಆದ ಮೋಕ್ಷಪ್ರಾಪ್ತಿಗೆ ಚಿತ್ತಶುದ್ಧಿಯು ಪ್ರಥಮ ಮೆಟ್ಟಿಲು. ಈ ಚಿತ್ತಶುದ್ಧಿಯು 'ಕರ್ಮಾಣಿ ಚಿತ್ತಶುದ್ಧರ್ಥಂ' ಎಂಬಂತೆ ಸತ್ಕರ್ಮಗಳಿಂದ ಘಟಿಸುತ್ತದೆ ಎಂದು ನಮ್ಮ ಪೂರ್ವಿಕರ ಅಂಬೋಣ. ದೇವತಾ ಆರಾಧನೆಯ ತಾತ್ಪರ್ಯ ದೇವರ ಮೂರ್ತಿಗಳ ಸಗುಣೋಪಾಸನೆಯು ಈ ಸತ್ಯರ್ಮಗಳ ಸಾಲಿನಲ್ಲಿ ಅಗ್ರಗಣ್ಯವಾಗಿ ನಿಲ್ಲುತ್ತದೆ. ಈ ರೀತಿಯಲ್ಲಿ ಶ್ರೇಷ್ಠವಾದ ಈ ಸಗುಣೋಪಾಸನೆಯನ್ನು ಅಥವಾ ದೇವತಾರಾಧನೆಯನ್ನು ಅತ್ಯಂತ ವ್ಯವಸ್ಥಿತವಾಗಿ ಅನೂಚಾನವಾಗಿ ಸಾಗಿ ಬರುವಂತೆ ಮಾಡಿರುವ ಶಾಸ್ತ್ರವೇ ಆಗಮಶಾಸ್ತ್ರ. ಆಗಮಶಾಸ್ತ್ರದ ಕುರಿತು ಈ ಶ್ಲೋಕವು ಅತ್ಯಂತ ಜನಪ್ರಿಯವಾಗಿದೆ.


ree

ಆಗತಂ ಶಿವವಕ್ತಾತ್ತು ಗತಂ ತು ಗಿರಿಜಾನನಂ ।

ಮತಂ ಚ ವಾಸುದೇವಸ್ಯ ತಸ್ಮಾದಾಗಮ ಉಚ್ಯತೇ ॥


- ಶಿವನ ಮುಖದಿಂದ ಆಗಮಿಸಿದ್ದು,


- ಪಾರ್ವತಿಯ ಕಿವಿಗೆ ಗಮಿಸಿದ್ದು (ಪಾರ್ವತಿಯು ಆಲಿಸಿದ್ದು)


- ವಿಷ್ಣುವು ಅಭಿಮತ ನೀಡಿದ್ದರಿಂದ (ಅಭಿಮತದಿಂದ)


'ಆಗಮಶಾಸ್ತ್ರ' ಎಂದು ಪ್ರಸಿದ್ದಿ ಪಡೆದಿದೆ ಎಂದು ಈ ಶ್ಲೋಕದ ಅಭಿಪ್ರಾಯ. ವಸ್ತು ನಿಷ್ಠವಾಗಿ ಚಿಂತಿಸಿದಾಗ ಅನೇಕ ತಾಂತ್ರಿಕ ಗ್ರಂಥಗಳು ಶಿವ ಪಾರ್ವತಿಯರ ಸಂವಾದ ರೂಪದಲ್ಲಿರುವುದು ಈ ಶ್ಲೋಕದ ತಾತ್ಪರ್ಯಕ್ಕೆ ಪುಷ್ಟಿ ನೀಡುತ್ತದೆ. ಹೀಗೆ ಶಿವಪಾರ್ವತಿಯರ ಸಂವಾದ ರೂಪದಲ್ಲಿ ತತ್ರ-ತತ್ರ ಅನ್ಯರೂಪದಲ್ಲಿಯೂ ದೊರೆಯುವ ಅನೇಕ ಆಗಮ ಗ್ರಂಥಗಳು ಭರತಭೂಮಿಯಲ್ಲಿ ಅಸ್ತಿತ್ವದಲ್ಲಿ ಉಳಿದುಕೊಂಡಿವೆ.


ಅತ್ಯಂತ ವಿಸ್ತಾರವೂ ವಿಷಯಗಳು ವಿಕ್ಷಿಪ್ತವೂ ಆದ್ದರಿಂದ ಈ ಗ್ರಂಥಗಳು ಕಾಲಕ್ರಮೇಣ ಸಾಮಾನ್ಯ ವಿದ್ವಾಂಸರಿಗೆ ಅನುಷ್ಠಾನಕ್ಕೆ ತರಲು ದುಷ್ಕರವಾಯಿತು.


ಇದನ್ನರಿತು ಅನೇಕ ಶ್ರೇಷ್ಠ ವಿದ್ವಾಂಸರು ತಮ್ಮ ಆಳವಾದ ಅಧ್ಯಯನದಿಂದ ಹಾಗೂ ಉನ್ನತವಾದ ಅನುಷ್ಠಾನದಿಂದ ಈ ಮೂಲಗ್ರಂಥಗಳ ಸಾರವನ್ನು ಗ್ರಹಿಸಿ ಮೂಲಗ್ರಂಥಗಳ ವಿಧಿ ನಿಯಮಗಳಿಗೆ ಧಕ್ಕೆ ಉಂಟಾಗದಂತೆ ಆಚರಿಸಲು ಸುಲಭವಾಗುವಂತೆ ಅನೇಕ ಗ್ರಂಥಗಳನ್ನು ಹೊರತಂದರು. ಇಂಥಹ ಗ್ರಂಥಗಳಲ್ಲಿ ನಾರಾಯಣ ನಂಬೂದರಿ ಕೃತ 'ತಂತ್ರ ಸಮುಚ್ಚಯ'ವೂ ಒಂದು ರತ್ನಪ್ರಾಯ ಗ್ರಂಥವಾಗಿದೆ. ಈ ಗ್ರಂಥವು ದೇವಾಲಯ ಹಾಗೂ ಮೂರ್ತಿ ವಿಷಯವಾಗಿ ಹನ್ನೆರಡು ಪಟಲಗಳಲ್ಲಿ (೧೮೦೧) ಸಾವಿರದ ಎಂಟುನೂರ ಒಂದು ವಿವಿಧ ಛಂದಸ್ಸಿನ ಶ್ಲೋಕಗಳಲ್ಲಿ ವಿದಿತ ಪಡಿಸಿದೆ. ಕಾಶ್ಯಪೀಯ ಪ್ರಪಂಚಸಾರ, ಈಶಾನ ಗುರುದೇವ ಪದ್ಧತಿ ಮುಂತಾದ ಗ್ರಂಥಗಳು ಸಾರಸ್ವರೂಪದ ಮೂರ್ತಿರೂಪವೇ ಈ ಗ್ರಂಥವು. ಕೇರಳದ ಕೆಲವು ಧಾರ್ಮಿಕ ಶಿಕ್ಷಣ ಕೇಂದ್ರಗಳಲ್ಲಿ ಈ ಗ್ರಂಥವು ಪಠ್ಯದ ವಿಷಯದಲ್ಲಿ ಸೇರಿರುವುದು ಈ ಪುಸ್ತಕದ ಜನಪ್ರಿಯತೆಗೆ, ವೈಶಿಷ್ಟ್ಯತೆಗೆ ಹಿಡಿದ ಸಾಕ್ಷಿಯಾಗಿದೆ.



ತಂತ್ರ ಕುಸುಮಾಂಜಲಿ / Tantra Kusumaanjali
Buy Now


ಶ್ಲೋಕರೂಪದಲ್ಲಿ ವಿಷದವಾಗಿರುವ ಈ ಗ್ರಂಥವನ್ನಾಧರಿಸಿ 'ಅನುಷ್ಠಾನ ಪದ್ಧತಿ' ಎಂಬ ಪ್ರಯೋಗಾತ್ಮಕ ಗ್ರಂಥವು ರೂಪುಗೊಂಡಿತು. ಈ ಗ್ರಂಥದ ಕರ್ತೃವೂ ಕೇರಳ ಪ್ರಾಂತದವನಾಗಿರಬೇಕೆಂದು ವಿಮರ್ಶಕರ ಅಭಿಪ್ರಾಯ. ತಾಳೆಗರಿ ರೂಪವಾದ ಈ ಗ್ರಂಥದಲ್ಲಿ ಪೂಜಾಪದ್ಧತಿಯಿಂದಾರಂಭಿಸಿ- ಉತ್ಸವಾಂತ ಭಾಗಗಳು ಒಳಗೊಂಡಿದ್ದುವು. ಈ ಗ್ರಂಥವನ್ನು ಪುನಃ ಪರಿಷ್ಕರಿಸಿದವರು ನಮ್ಮ ರಾಜ್ಯದ ಘನ ವಿದ್ವಾಂಸರೂ ಚತುಃಶಾಸ್ತ್ರ ಕೋವಿದರೂ ಆದ ಕೋಟ ವಾಸುದೇವ ಸೋಮಯಾಜಿಗಳು, ಶ್ರೀಯುತರು ಈ ಗ್ರಂಥದಲ್ಲಿ ಪ್ರತಿಷ್ಠಾ ಪ್ರಯೋಗ, ಜೀರ್ಣೋದ್ಧಾರ ವಿಧಾನಗಳನ್ನೂ ಸೇರಿಸಿ ಪರಿಪೂರ್ಣ ಗ್ರಂಥವನ್ನಾಗಿ ನಿರೂಪಿಸಿದರು. ಈ ಅನುಷ್ಠಾನ ಪದ್ಧತಿಯ ರೀತಿಯಲ್ಲಿಯೇ ತಂತ್ರಸಮುಚ್ಚಯವನ್ನಾಧರಿಸಿ ಮಳೆಯಾಳಿ ಭಾಷೆಯಲ್ಲಿ 'ಕುಳಿಕ್ಕಾಟ್ಟುಪಚ್ಚೆ' ಎಂಬ ಗ್ರಂಥವು ಪ್ರಸಿದ್ದಿಯಲ್ಲಿರುವುದು ಗಮನಾರ್ಹವಾಗಿದೆ.


ದೇವನಾಗರಿ ಲಿಪಿಯಲ್ಲಿರುವ ಗ್ರಂಥವನ್ನು ಅಧ್ಯಯನ ಮಾಡಿ ಪ್ರಯೋಗಕ್ಕಿಳಿಸುವುದು ಇಂದಿನ ಪೀಳಿಗೆಗೆ ಸ್ವಲ್ಪ ಕಷ್ಟಸಾಧ್ಯ ವಿಷಯ. ಅನುಷ್ಠಾನ ಪದ್ಧತಿಯಂತಹ ಗ್ರಂಥ ಕನ್ನಡ ಭಾಷೆಯಲ್ಲಿ ದೊರೆತರೆ ಪ್ರಯೋಗಜ್ಜರಿಗೆ ಬಹಳ ಪ್ರಯೋಜನ ಆದೀತು ಎನ್ನುವುದನ್ನು ಮನಗಂಡು ನನ್ನ ಗುರುಗಳಾದ ಆಗಮಶಾಸ್ತ್ರ ವಿಶಾರದರಾದ ಕೆ.ಪಿ. ಶಂಕರ ಸೋಮಯಾಜಿಗಳು 'ತಂತ್ರ ಕುಸುಮಾಂಜಲಿ' ಎಂಬ ಗ್ರಂಥವನ್ನು ನಿಮಗಾಗಿ ರೂಪಗೊಳಿಸಿದ್ದಾರೆ.


ತಂತ್ರ ಕುಸುಮಾಂಜಲಿಯ ವೈಶಿಷ್ಟ್ಯತೆಗಳು:


೧) ಈ ಕುಸುಮಾಂಜಲಿಯು ಅನುಷ್ಠಾನಪದ್ಧತಿಯ ಕನ್ನಡಾನುವಾದವಾಗಿದೆ.


೨) ಇದರಲ್ಲಿ ಅನುಷ್ಠಾನಪದ್ಧತಿಯಂತೆ ಎಷ್ಣು ಶಿವಾದಿ ಏಳು ದೇವತೆಗಳ ಪ್ರತಿಷ್ಠಾಪನಾವಿಧಿ, ಕಲಶ, ಉತ್ಸವಾದಿಗಳು ವಿವರಿಸಲ್ಪಟ್ಟಿವೆ.


೩) ಬಲಿಸೂತ್ರಗಳನ್ನು ಬೇರೆಡೆಯಿಂದ ಅನುಕೂಲಕ್ಕಾಗಿ ಸಂಗ್ರಹಿಸಲಾಗಿದೆ.


೪) ಈಶಾನ ಗುರುದೇವ ಪದ್ಧತಿಯಿಂದ ಸೂರ್ಯಬಲಿಸೂತ್ರವನ್ನು ಸಂಗ್ರಹಿಸಲಾಗಿದೆ. ಸೂರ್ಯ ಪ್ರತಿಷ್ಠಾವಿಧಿಯು ನವಗ್ರಹಸಪರ್ಯಾ ಪದ್ಧತಿಯಲ್ಲಿ ಸಂಗ್ರಹಿಸಲಾಗಿದೆ. ಹಸ್ತಪ್ರತಿಯೊಂದರಿಂದ ಹನುಮದ್ದಲಿ ಸೂತ್ರ ಮೊದಲಾಗಿ ಸಂಗ್ರಹಿಸಲಾಗಿದೆ. ಅನುಷ್ಠಾನ ಪದ್ಧತಿಯಲ್ಲಿ ಈ ವಿಷಯಗಳು ಒಳಗೊಂಡಿಲ್ಲವೆನ್ನುವುದು ಗಮನಾರ್ಹ.


೫) ಕಲಶಮಂಡಲಗಳು ಸುಂದರವಾಗಿ ಮೂಡಿಬಂದಿದೆ.


೬) ಗರ್ಭಗುಡಿಯನ್ನು ಮಧ್ಯದಲ್ಲಿ ಹೊಂದಿಸಿ ಅದಕ್ಕನುಗುಣವಾಗಿ ಬಲಿದೇವತೆಗಳ ಸ್ಥಾನ ನಿರ್ದೇಶನಪೂರ್ವಕವಾಗಿ ಚಿತ್ರಿಸಲಾಗಿದೆ.


ಹೀಗೆ ಹಲವು ವೈಶಿಷ್ಟ್ಯಗಳಿಂದ ಕೂಡಿದ ಈ ಗ್ರಂಥವನ್ನು ವಿಷಯದ ದೃಷ್ಟಿಯಿಂದ ಐದು ವಿಧವಾಗಿ ವಿಭಾಗಿಸಬಹುದು.


ವಿಷಯಗಳು:


೧. ಪ್ರತಿಷ್ಠಾ ವಿಧಾನ

೨. ಪೂಜಾ ವಿಧಾನ

೩. ಕಲಶ ವಿಧಾನ

೪. ಉತ್ಸವ ವಿಧಾನ

೫. ಪ್ರಾಯಶ್ಚಿತ್ತ (ಜೀರ್ಣೋದ್ಧಾರ) ವಿಧಾನ


ಪ್ರತಿಷ್ಠಾ ವಿಧಾನದಲ್ಲಿ ವರಣೆ ಮಧುಪರ್ಕಾದಿಗಳು, ಆಚಾರ್ಯ ಪರಿಗ್ರಹ, ಬಿಂಬಪರಿಗ್ರಹ, ಜಲಾಧಿವಾಸ ಇತ್ಯಾದಿ ಆರಂಭಿಸಿ ಮೂರ್ತಿ ಪ್ರತಿಷ್ಠಾ ವಿಧಾನಗಳು ಅನುಷ್ಠಾನ ಪದ್ಧತಿಯಂತೆ ವಿವರಿಸಲ್ಪಟ್ಟಿವೆ.


ಪೂಜಾ ವಿಧಾನದಲ್ಲಿ ನಾಡೀ ಶೋಧ, ಶೋಷಣಾದಿಗಳು, ಪೀಠಪೂಜಾ, ಪೂಜಾಹೋಮ, ನಿತ್ಯಬಲಿ, ಪ್ರಸನ್ನಪೂಜೆ ಇತ್ಯಾದಿ.


ಉತ್ಸವವಿಧಿಯಲ್ಲಿ- ಧ್ವಜಾರೋಹಣ, ತೋರಣ ಮೂಹೂರ್ತ, ಅಂಕುರ ಪೂಜೆ, ಅಧಿವಾಸಾದಿ ಹೋಮಗಳು, ಉತ್ಸವಬಲಿ, ರಥೋತ್ಸವ ಹೀಗೆ ಹಲವಾರು ವಿಧಿ ವಿಧಾನಗಳು.




ಶ್ರೀ ಉಚ್ಛಿಷ್ಟ ಗಣಪತಿ ತಂತ್ರ / Shree Uchishta Ganapati Tantra
Buy Now


ತಂತ್ರಸಮುಚ್ಚಯ / Tantrasamuchhaya
Buy Now


ಶಿವ ಮಂತ್ರೋಪಾಸನ ದೀಪಿಕಾ / Shiva Mantropasana Deepika
Buy Now

 
 
 

Comments


Groups

STAY CONNECTED

Get the latest news & updates

ganapapustaka@gmail.com
Tel. +91 9483855488

© 2025 by GANAPA PUSTAKA.

bottom of page